<ನಳಚರಿತ್ರೆ
ನಳಚರಿತ್ರೆ:ಮೂರನೆಯ ಸಂಧಿ (ಸಂಗ್ರಹ)
ಮೂರನೆಯ ಸಂಧಿ 
ಕೇಳಿದನು ನಸುನಗುತ ಭೀಮನೃಪ 
ಪಾಲ ತನ್ನಾತ್ಮಜೆಯ ಯೌವನ 
ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ 
ಓಲಗಕೆ ನಡೆತಂದು ಬರೆಸಿದ 
ನೋಲೆಗಳ ಕಳುಹಿದನು ಧರಣೀ 
ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ ||೪||

ಹರಿದರರಸಾಳುಗಳು ದಿಕ್ಖುಗ 
ಳರಸುಗಳ ನಗರವನು ಇತ್ತಲು 
ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ 
ತರಿಸಿದರು ಭಂಡಾರದಲಿ ನವ 
ಭರಿತವಾದ ಸುವಸ್ತುಗಳ ವಿ 
ಸ್ತರಿಸಿ ಕಟ್ಟಿದರಗಲದಲಿ ವೈವಾಹಮಂಟಪವ ||೫||

ಆ ಸಮಯದಲಿ ನಾರದನು ಹರಿ 
ವಾಸುದೇವಾಯೆಂಬ ವೀಣೆಯ 
ಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿ 
ವಾಸವನ ಸಭೆಗೈತರಲು ಸಂ 
ತೋಷದಿಂದಿದಿರೆದ್ದು ಘನ ಸಂ 
ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ ||೧೦||

ಎತ್ತಣಿಂದೈತಂದಿರುರ್ವಿಯೊ 
ಳುತ್ತಮರು ಧರಣೀಶರಲಿ ನೆರೆ 
ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು 
ಚಿತ್ತವಿಸಿ ಮುನಿನಾಥಯೆನಗದ 
ಬಿತ್ತರಿಸಿ ಪೇಳೆನಲು ಸುರಮುನಿ 
ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ ||೧೧||

ಅಮರಪತಿ ಕೇಳವನಿಯಲಿ ಭೂ 
ರಮಣರುಂಟು ಅನೇಕವವರೊಳು 
ನಿಮಗೆ ಪೇಳ್ವೆ ವಿದರ್ಭಪುರಪತಿ ಭೀಮನೃಪತನುಜೆ 
ಕಮಲಮುಖಿ ದಮಯಂತಿಗೆವ್ವನ 
ಸಮತಳಿಸೆ ಚಿತ್ತದಿ ಸ್ವಯಂವರ 
ಕಮಿತಬಲ ನೃಪರೈದಿ ಬರುತಿರೆ ಧರಣಿಯಗಲದಲಿ ||೧೨||

ಅರಸ ಕೇಳಮರೇಂದ್ರನಾ ಮುನಿ 
ವರನ ವಚನವ ಕೇಳಿ ಹೆಚ್ಚಿದ 
ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ 
ಪರಮಸತಿ ದಮಯಂತಿಯಳನುಪ
ಚರಿಯದಲಿ ಯೆನಗೊಲಿಯೆ ಮಾಡೆಂ
ದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ||೧೪||

ನಳಿನಮಿತ್ರನ ತೇಜದವೊಲಿಳೆ 
ಗಿಳಿವ ಮಹಿಮರ ಕಂಡು ರಥದಿಂ 
ದಿಳೆಗಿಳಿದು ಭಕ್ತಿಯಲಿ ನಳ ಕೈಮುಗಿದು ನಿಂದಿರಲು 
ತಳಿತ ಹರು ಷಾನಂದದಲಿ  ಬರ 
ಸೆಳೆದು ಬಿಗಿಯಪ್ಪಿದರು ರಾಯನ 
ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು ||೧೬||

ಕುಶಲವೇ ನಳನೃಪತಿ ಬಾರೈ 
ಶಶಿಕುಲೋದ್ಭವ ನಿನ್ನ ಪಿತನೀ 
ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ 
ಒಸೆದು ಬೇಡುವ ಕಾರ್ಯವಿದು ಭರ 
ವಸದಿ ಬಂದೆವು ನಮಗೆ ಫಲ ಸಿ 
ದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ ||೧೭||

ಭೂತಳದೊಳಿಹ ಸತಿಯರಲಿ ರೂ 
ಪಾತಿಶಯೆ ದಮಯಂತಿಯೆನಲಾ 
ಮಾತಿನಲಿ ಮನವೊಲಿದುದೆನಗವಳಲ್ಲಿ ನೀಪೋಗಿ 
ಆ ತಳೋದರಿಗುಚಿತವಚನವ 
ಪ್ರೀತಿಪೂರ್ವಕದಿಂದ ಸತಿಯಳ
ನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ ||೧೯||

ಕೇಳಿದಾಮಾತಿನಲಿ ಚಿಂತೆಯ 
ತಾಳಿದನು ಚಿತ್ತದಲಿ ನಳನೃಪ 
ಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳು 
ಆ ಲತಾಂಗಿಯ ಮೇಲೆ ಪರಮವಿ 
ಶಾಲಮನವಿಹುದಿನ್ನು ಶಿವಶಿವ 
ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ ||೨೧||

ಬಂದರಲ್ಲಿಗೆ ಸುರಪ ಕಳುಹಿದ 
ಮಂದಗಮನೆಯರಖಿಳವಸ್ತುವ 
ತಂದು ಕಾಣಿಕೆಗೊಟ್ಟು ಕೈಮುಗಿದೆರಗಿ ನಿಂದಿರಲು 
ಬಂದ ಸತಿಯರ ನೋಡಿ ನೀವೆ 
ಲ್ಲಿಂದ ಬಂದಿರಿ ನಿಮ್ಮ ಹದನೇ 
ನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ ||೨೯||

ತಾಯಿ ಕೇಳಮರೇಂದ್ರ ನಿಮ್ಮ ನಿ 
ಜಾಯತದ ಚೆಲುವಿಕೆಯ ಕೇಳಿದು 
ಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆ 
ಆಯತದ ಭೂಷಣವ ತೊಡು ಸುರ 
ರಾಯನಿಗೆ ಸತಿಯಾಗು ಮರ್ತ್ಯದ
ರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ ||೩೦||

ಎನಲು ಕೇಳಿದಳಾ ನುಡಿಯ ಸುರ 
ವನಿತೆಗೆಂದಳು ಚಿತ್ತವೆನಗೊ 
ಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲ 
ಅನಿಮಿಷಾಧಿಪ ತನಗೆ ದೇವಾಂ 
ಗನೆಯರಿರುತಿರೆ ಮನುಜಸತಿ ಪಾ 
ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ ||೩೩||

ಮರಳಿದರು ಸುರಸತಿಯರಿತ್ತಲು 
ಬರುತೆ ನಳನೃಪತಿಲಕ ತಾ ಮನ 
ಹರುಷದಲಿ ನಿಜರೂಪ ತಾಳ್ದನು ರಾಜತೇಜದಲಿ 
ಅರಸನಿರೆ ದಮಯಂತಿ ಕಂಡ 
ಚ್ಚರಿಯ ಮದನನೊ ನಳನೊ ನಳಕೂ 
ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ ||೩೪||

ಆರು ನೀವೆಲ್ಲಿಂದ ಬಂದಿರಿ 
ಕಾರಣವಿದೇನೆಮ್ಮ ರಾಜ 
ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ 
ಸೇರಲಮ್ಮದು ನೀವಘಾಡದ 
ವೀರರತಿಸೌಂದರ್ಯರೆನೆ ನಳ 
ಭೂರಮಣ ನಸುನಗುತ ನುಡಿದನು ಸತಿಗೆವಿನಯದಲಿ ||೩೬||

ಬಲ್ಲವರು ನೀವಧಿಕರೆಮ್ಮೊಳು 
ಸಲ್ಲದೀ ನುಡಿಯೇತಕಿದು ಶಚಿ 
ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು 
ವಲ್ಲಭನು ನಳನೃಪತಿಯಲ್ಲದೆ 
ನಲ್ಲರುಂಟೆ ಜಗದಿ ನೀವ್ ಸುರ 
ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ ||೩೮||

ದೂತರಲಿ ಕುಲಗೋತ್ರಗಳ ನೀ 
ನೇತಕರಸುವೆ ತರುಣಿಯಿಂದ್ರನು 
ಖ್ಯಾತ ಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು 
ಭೂತಳದ ನರರಧಿಕರೇ ಸಂ 
ಪ್ರೀತಿಯೇಕವರಲ್ಲಿ ಬಿಡು ಪುರು 
ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ ||೩೯||

ಮಾನವಾಧೀಶ್ವರರೊಳಗೆ ಸನು 
ಮಾನವುಳ್ಳವ ಸತ್ತಸಂಧ ನಿ 
ಧಾನಿ ಹಿಮಕರವಂಶಪಾವನ ಸಾರ್ವಭೌಮನಲೆ 
ಆ ನರೇಂದ್ರಗೆ ಸರಿಯೆ ಮನುಮುನಿ 
ದಾನವಾಮರರಿನ್ನು ನಿಮಗೀ 
ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ ||೪೧||

ನಿಷಧಪತಿಯೇ ಪತಿಯೆನುತ ಭಾ 
ವಿಸಿದೆನಾತನ ಕರುಣವೆನ್ನಲಿ 
ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ 
ಅಸುವ ತೆರುವೆನು ಎನಗೆ ಫಲ ಸಿ 
ದ್ಧಿಸಲಿದೇ ಸಂಕಲ್ಪವೆಂದಾ 
ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ ||೪೨||

ಕರಗಿತಂತಃಕರಣ ನೃಪತಿಗೆ 
ಸರಸಿಜಾಕ್ಷಿಯ ದೃಢವ ಕಂಡನು 
ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ 
ಸರಸಿಜಾನನೆ ಕೇಳು ತಾನೇ 
ಧರಣಿಪತಿ ನಳನೆನಲು ಲಜ್ಜಿಸಿ 
ಶಿರವ ನಸು ಬಾಗಿದಳು ಮತ್ತಿಂತೆಂದಳಾ ನೃಪಗೆ ||೪೪||

ನಳನೆನಲು ತನು ಪುಳಕಜಲದಲಿ 
ಮುಳುಗಿ ಹೊಂಪುಳಿಯೋಗಿ ತನ್ನಯ 
ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ 
ತೊಲಗಿದಳು ನೃಪನಿತ್ತ ಪುರವನು 
ಕಳೆದು ಬಂದನು ಮನದ ವಿರಹದಿ 
ಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ ||೪೬||

ಬಂದು ಭಯಭೀತಿಯಲಿ ನಳನೃಪ 
ನಿಂದ್ರ ಮಾರುತ ಯಮ ವರುಣರಿಗೆ 
ವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲು 
ಒಂದು ನಿನ್ನಲಿ ಕುಟಿಲವಿಲ್ಲರ 
ವಿಂದವದನೆಯರಿಂದ ಕೇಳಿದೆ 
ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ ||೪೭||

ಲಲನಯೊಲಿವುದಕಿನ್ನು ಹದನಿದು 
ಹಲವು ಮಾತೇನೆಂದು ನಾಲ್ವರು 
ನಳನ ರೂಪನು ತಾಳ್ದರಿತ್ತಲು ಧರಣಿವಲ್ಲಭರು 
ನಲಿದು ಬರುತಿರೆ ಸ್ವರ್ಗ ಮರ್ತ್ಯಾ 
ವಳಿಯ ಸುಜನರು ಸಿದ್ಧ ಕಿನ್ನರ 
ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ ||೪೯||

ನೆರೆದುದಗಣಿತದರಸುಗಳು ಕರಿ 
ತುರಗ ರಥ ಪಾಯ್ದಳದ ಸಂದಣಿ 
ಮೆರೆವ ಶಂಖ ಮೃದಂಗ ತಂಬಟ ಭೇರಿ ನಿಸ್ಸಾಳ 
ಉರುಬಿತಲ್ಲಿ ವಿದರ್ಭಪುರಪತಿ 
ಧರಿಸಲಾಪನೆ ಹರಮಹಾದೇ
ವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ||೫೦||

ಕುಡಿತೆಗಂಗಳ ಸಿರಿಮುಡಿಯ ಬಡ 
ನಡುವ ಸೆಳೆವತಿಬೆಡಗಿನಲಿ ಹೊಂ 
ಗೊಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದ 
ತೊಡರ ಝಣಝಣರವದ ಮೆಲ್ಲಡಿ 
ಯಿಡುವ ಗಮನದ ಭರದಿ ಕಿರುಬೆಮ 
ರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ ||೫೬||

ನಿಗಮನುತೆ ಗೀರ್ವಾಣಿ ರಕ್ಷಿಸು 
ಮುಗುದರನು ಕರುಣದಲಿ ನೋಡುತ 
ಲಗಣಿತದಲಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ 
ಮಗಳ ಮನ ವಿಗಡಿಸಿತು ನಾಲ್ವರು 
ಬೆರಗುಗೊಳಿಸಿದರೆನಲು ಭಾರತಿ 
ನಗುತ ನುಡಿದಳು ಕರೆದು ದಮಯಂತಿಯನುಪಚರಿಸಿ ||೬೫||

ದೇವಮಾಯವಿದೀಗ ಕೇಳೆಲೆ 
ದೇವಿ ಇಂದ್ರನ ಭಜಿಸೆನಲು ಸಂ 
ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ 
ದೇವಕುಲಸಂಭವರು ರಕ್ಷಿಸಿ 
ನೀವು ಮಗಳೆಂದೆನ್ನ ಭಾವಿಸಿ 
ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ ||೬೬||

ಘಳಿಲನೇ ಪ್ರಚ್ಛನ್ನವೇಶವ 
ಕಳೆದು ಯಮ ಪವಮಾನ ವರುಣರು 
ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ 
ನಳನೃಪನ ಕರೆಸಿದರು ಹೂವಿನ 
ಮಳೆಯ ಕರೆದರು ದೇವದುಂದುಭಿ 
ಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ ||೬೭||

ನೋಡಿ
ನಳಚರಿತ್ರೆ- ಸಂಧಿಗಳು>:೧೨೩೪೫೬೭೮೯
ನೋಡಿ

ವರ್ಗ:ಕನಕದಾಸರ ಸಾಹಿತ್ಯ
ವರ್ಗ:ಕನ್ನಡ ಸಾಹಿತ್ಯ

 